ಸ್ಯಾಮ್ಯುಯಲ್ ಟೇಲರ್ ಕೋಲ್ ರಿಜ್: -
1772-1834. ಇಂಗ್ಲಿಷ್ ಕವಿ, ವಿಮರ್ಶಕ ಹಾಗೂ ತಾತ್ತ್ವಿಕ. ಡೆವನ್‍ಷೈರಿನ ಆಟರಿ-ಸೇಂಟ್ ಮೇರಿ ಎಂಬ ಗ್ರಾಮದಲ್ಲಿ ಜನಿಸಿದ. ಇವನ ತಂದೆ ಅಲ್ಲಿನ ಪಾದ್ರಿಯೂ ಶಾಲೆಯ ಉಪಾಧ್ಯಾಯನೂ ಆಗಿದ್ದ. ಗುಣಶೀಲದಲ್ಲಿ ಆತ ಪ್ರಾಮಾಣಿಕ ಶ್ರದ್ಧೆಯ ಸತ್ಪುರುಷನಾದರೂ ನಡೆ ನುಡಿಯಲ್ಲಿ ಸ್ವಲ್ಪ ವಿಚಿತ್ರ ವ್ಯಕ್ತಿಯಾಗಿದ್ದ. ಆತನ ಹದಿಮೂರು ಮಕ್ಕಳಲ್ಲಿ ಸ್ಯಾಮ್ಯುಯಲ್ ಕೊನೆಯವ. ಕಿನ್ನರ ಕಥೆ ಕೇಳುವುದು, ಹಗಲು ಗನಸು ಕಾಣುವುದು ಎಂದರೆ ಇವನಿಗೆ ತುಂಬ ಪ್ರೀತಿ; ಜೊತೆಗೆ ತನ್ನ ಪಂಡಿತ ಪಿತನೊಂದಿಗೆ ಸುದೀರ್ಘವಾಗಿ ಸಂಭಾಷಿಸುವುದರಲ್ಲೂ ಅಷ್ಟೇ ಆಸಕ್ತಿ. ಆದರೆ ಒಂಬತ್ತು ತುಂಬುವುದರೊಳಗೆ ತಂದೆಯನ್ನು ಕಳೆದುಕೊಂಡ. 1782ರಲ್ಲಿ ಇವನನ್ನು ಲಂಡನ್ನಿನಲ್ಲಿದ್ದ ಕ್ರೈಸ್ಟ್ಸ್ ಹಾಸ್ಪಿಟಲ್ ಎಂಬ ಪಾಠಶಾಲೆಗೆ ಉಚಿತ ವಿದ್ಯಾರ್ಥಿಯಾಗಿ ಸೇರಿಸಲಾಯಿತು. ಮೊದಮೊದಲು ಅಲ್ಲಿನ ಬಾಳು ಸ್ಯಾಮ್ಯುಯಲನಿಗೆ ಕಷ್ಟಕರವಾಗಿಯೂ ಉಲ್ಲಾಸರಹಿತವಾಗಿಯೂ ತೋರಿ ಬಂತು. ಹುಡುಗ ಕಂಬನಿ ಸುರಿಸುವುದನ್ನು ನೋಡಿ ಉಪಾಧ್ಯಾಯ ಬೋಯರ್ `ಮಗು, ಸ್ಕೂಲೇ ನಿನ್ನ ತಂದೆ, ತಾಯಿ, ಸಹೋದರ, ಸಹೋದರಿ, ಸಕಲ ಬಂಧು ಬಳಗ; ಅಳು ನಿಲ್ಲಿಸು ಎಂದನಂತೆ. ಕೋಲ್‍ರಿಜ್‍ನ ಪ್ರಚಂಡ ಬುದ್ಧಿಶಕ್ತಿ ವಾಗ್ವೈಭವ ಬೇಗ ಬೇಗ ಪ್ರಕಟವಾಗುತ್ತ ಬಂತು. ತತ್ತ್ವಜ್ಞರ ಗಹನ ಸಿದ್ಧಾಂತಗಳನ್ನು ಕುರಿತು ಈತ ಮಾಡುತ್ತಿದ್ದ ಭಾಷಣಗಳು ಸಹಪಾಠಿಗಳಲ್ಲೇ ಅಲ್ಲದೆ ಅಧ್ಯಾಪಕರಲ್ಲೂ ಅತಿಥಿಗಳಲ್ಲೂ ವಿಸ್ಮಯವನ್ನೂ ಗೌರವವನ್ನೂ ಹುಟ್ಟಿಸುತ್ತಿದ್ದುವು. ಹದಿನೇಳನೆಯ ವಯಸ್ಸಿನಲ್ಲಿ ಒಂದು ರಜಾ ದಿವಸ ಈತ ಅತಿಶೀತಗೊಂಡಿದ್ದ ನದಿಯಲ್ಲಿ ಉಡುಪು ಸಹಿತ ಈಜಾಡಿದನಾಗಿ ಸಂಧಿವಾತಕ್ಕೆ ಪಕ್ಕಾಗಿ ಹಲವು ಮಾಸ ಚಿಕಿತ್ಸಾಲಯದಲ್ಲಿ ಇರಬೇಕಾಗಿ ಬಂತು. ಸಂಗಾತಿಯೊಬ್ಬನ ತಂಗಿಯ ಮೇಲೆ ಇವನಿಗೆ ಉಂಟಾದ ಮೋಹ ಫಲಿಸದೆ ಆ ಹುಡುಗಿ ಬೇರೊಬ್ಬನನ್ನು ವರಿಸಿದಳು.

1791 ಕೋಲ್‍ರಿಜ್ ಕೇಂಬ್ರಿಜ್ ವಿಶ್ವವಿದ್ಯಾಲಯವನ್ನು ಹೊಕ್ಕ. ತನ್ನ ಬಳಿ ಇದ್ದ ಹಣ ಎಷ್ಟೆಂಬುದನ್ನು ಲೆಕ್ಕಿಸದೆ ಸಾಮಾನು ಸರಂಜಾಮನ್ನು ತರಿಸಿಕೊಂಡು ವಾಸದ ಕೋಣೆಯನ್ನು ಅಲಂಕರಿಸಿದ. ಮೈಕೈಯೆಲ್ಲ ಸಾಲವಾದರೂ ವಿವೇಕ ಉದಿಸಲಿಲ್ಲ. ಸಾಲಗಾರರ ತಗಾದೆ ವಿಪರೀತವಾಗಲು ಹೇಳದೆ ಕೇಳದೆ ಲಂಡನ್ನಿಗೆ ಪಲಾಯನ ಗೈದು ಕೂಮರ್ ಬ್ಯಾಕ್ ಎಂಬ ಸುಳ್ಳು ಹೆಸರಿನಿಂದ ಅಶ್ವಪಡೆಯೊಂದಕ್ಕೆ ಸೇರಿಕೊಂಡ. ಕೆಲವು ತಿಂಗಳ ಅನಂತರ ಅಣ್ಣನಾದ ಕ್ಯಾಪ್ಟನ್ ಜೇಮ್ಸ್ ಕೋಲ್‍ರಿಜ್ ಅದನ್ನು ಪತ್ತೆ ಹಚ್ಚಿ ಇವನನ್ನು ಸೈನ್ಯದಿಂದ ಬಿಡಿಸಿ, ಪುನಃ ವಿಶ್ವವಿದ್ಯಾನಿಲಯಕ್ಕೆ ಹೋಗುವಂತೆ ಮಾಡಿದ. ಕಟ್ಟುನಿಟ್ಟಿನ ಕ್ರಮಬದ್ಧ ವ್ಯಾಸಂಗ ತನ್ನ ಜಾಯಮಾನಕ್ಕೆ ಹಿಡಿಸಲಿಲ್ಲವಾಗಿ ಕೋಲ್‍ರಿಜ್ ಯಾವ ಪದವಿಯನ್ನೂ ಪಡೆಯದೆ ವಿದ್ಯಾಸಂಸ್ಥೆಯಿಂದ ಹೊರಬಿದ್ದ. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋದಾಗ ಅಲ್ಲಿದ್ದ ರಾಬರ್ಟ್ ಸೌದೀ ಎಂಬ ತರುಣ ಕವಿಯ ಸ್ನೇಹ ಈತನಿಗೆ ಲಭಿಸಿತು. ಇಬ್ಬರೂ ಉತ್ಸಾಹಾವೇಶದವರು, ಆದರ್ಶವಾದಿಗಳು, ಹಗಲುಗನಸಿಗರು. ಫ್ರಾನ್ಸಿನ ಮಹಾಕ್ರಾಂತಿಯ ಪ್ರಭಾವವೂ ಇವೆ ಮೇಲೆ ಸಾಕಷ್ಟು ಇತ್ತು. ಅಮೆರಿಕದ ಅರಣ್ಯಪ್ರದೇಶಕ್ಕೆ ತೆರಳಿ ಒಂದು ನದೀತೀರದಲ್ಲಿ ಸರ್ವಸಮಾನಾಧಿಕಾರದ ನೂತನ ಸಮಾಜವೊಂದನ್ನು ಸ್ಥಾಪಿಸುವ ಹೆಬ್ಬಯಕೆ ಉಲ್ಬಣವಾಯಿತು, ಇಬ್ಬರ ಹೃದಯದಲ್ಲೂ. ಸಾಹಿತ್ಯ ಮತ್ತು ಬೇಸಾಯ ಎರಡೇ ಆ ಸಮಾಜದವರ ಕೆಲಸವಾಗಿರತಕ್ಕದ್ದು, ಪತಿಗಿರುವಷ್ಟೇ ಸ್ವಾತಂತ್ರ್ಯ ಪತ್ನಿಗೂ ಇರತಕ್ಕದ್ದು-ಇದು ಅವರ ಕನಸಿನ ಆದರ್ಶರಾಜ್ಯದ ಮುಖ್ಯ ಉದ್ದೇಶ. ಆದರೆ ದ್ರವ್ಯಾಭಾವದಿಂದಾಗಿ ಈ ಯೋಜನೆ ಕಾರ್ಯಗತವಾಗಲಿಲ್ಲ. ಗೆಳೆಯರಿಬ್ಬರೂ ಸೋದರಿಯರಿಬ್ಬರನ್ನೂ ವರಿಸಿದರು. ಸ್ಯಾರ ಫ್ರಿಕ್ಕರ್ ಕೋಲ್‍ರಿಜ್‍ನ ಹೆಂಡತಿ. ಈಡಿತ್ ಫ್ರಿಕ್ಕರ್ ಸೌದಿಯ ಹೆಂಡತಿ.

ಕವಿತೆ ಭಾಷಣ ಲೇಖನಗಳ ಮೂಲಕ ಹಣ ಸಂಪಾದಿಸಿ ಸಂಸಾರ ಹೊರೆಯಲು ಕೋಲ್‍ರಿಜ್ ಬಲು ಹೆಣಗಾಡಿದ. 1797ರಲ್ಲಿ ಇಂಗ್ಲೆಂಡಿನ ಉತ್ತರ ಭಾಗದ ಕ್ವಾಂಟಕ್ ಗುಡ್ಡಗಳ ತಪ್ಪಲಿನಲ್ಲಿ ಗುಡಿಸಲು ಕಟ್ಟಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸಿಸತೊಡಗಿದ. ಮುಂದಣ ಮೂವತ್ತು ಮಾಸಗಳಲ್ಲಿ ಇವರ ಮುಖ್ಯ ಕವನಗಳೆಲ್ಲ ರಚಿತವಾದುವು. ವಿಲಿಯಂ ವಡ್ರ್ಸ್‍ವರ್ತ್ ಮತ್ತು ಅವನ ಸಹೋದರಿ ಡಾರೋತಿ-ಇವರ ಅಮೂಲ್ಯ ಮೈತ್ರಿಯೂ ಕೋಲ್‍ರಿಜ್‍ಗೆ ಅಲ್ಲಿ ಲಭಿಸಿತು. ಸಾಹಿತ್ಯವನ್ನು ಕುರಿತ ಚರ್ಚೆಯಲ್ಲೂ ಕಾವ್ಯನಿರ್ಮಾಣದಲ್ಲೂ ಅವರ ದಿನಗಳು ಅಮೋದದಲ್ಲಿ ಕಳೆದುಹೋದುವು. ವಡ್ರ್ಸ್‍ವರ್ತ್ ಕೋಲ್‍ರಿಜ್‍ರ ಒಟ್ಟು ಪ್ರಯತ್ನದ ಫಲವಾಗಿ ಲಿರಿಕಲ್ ಬ್ಯಾಲಡ್ಸ್ ಎಂಬ ಕವನಸಂಗ್ರಹ 1798ರಲ್ಲಿ ಪ್ರಕಟಗೊಂಡಿತು. ಇಂಗ್ಲಿಷ್ ಸಾಹಿತ್ಯಚರಿತ್ರೆಯಲ್ಲಿ ಅದೊಂದು ಗಮನಾರ್ಹವಾದ ಮೈಲಿಗಲ್ಲು. ಅದೇ ವರ್ಷ ಮೂವರೂ ಜರ್ಮನಿಗೆ ಪ್ರವಾಸ ಬೆಳೆಸಿದರು. ಅಲ್ಲಿಂದ ಮುಂದೆ ಕವಿಗಳಿಬ್ಬರ ದಾರಿಯೂ ಬೇರೆ ಬೇರೆ ಆಯಿತು.

ಜರ್ಮನಿಯಲ್ಲಿ ಆಗ್ಗೆ ತತ್ತ್ವಶಾಸ್ತ್ರ ವಿಶೇಷ ಹುರುಪಿನಿಂದ ವರ್ಧಿಸುತ್ತಿತ್ತು. ಕಾಂಟ್, ಷೆಲ್ಲಿಂಗ್, ಫಿಶ್ಚೆ ಮುಂತಾದವರ ತರ್ಕಜಾಲಕ್ಕೂ ಅಭಿಪ್ರಾಯಗಳಿಗೂ ಕೋಲ್‍ರಿಜ್ ಮನಸೋತ. ತತ್ತ್ವಶಾಸ್ತ್ರ, ದೇವತಾಶಾಸ್ತ್ರಗಳೆಂದರೆ ಇವನಿಗೆ ಬಾಲ್ಯದಿಂದಲೂ ಅತ್ಯಧಿಕ ವಾಂಛಲ್ಯ. 1800ರಲ್ಲಿ ಸ್ವದೇಶಕ್ಕೆ ಹಿಂದಿರುಗಿ ಉತ್ತರದ ಕಂಬರ್‍ಲೆಂಡ್ ಪ್ರಾಂತ್ಯದಲ್ಲಿ ಮನೆ ಹೂಡಿಕೊಂಡ. ಸಂಧಿವಾತವೂ ಅದಕ್ಕೆ ಸಂಬಂಧಿಸಿದ ಇತರ ವ್ಯಾಧಿಗಳೂ ಇವನನ್ನು ಮೆಟ್ಟಿಕೊಂಡದ್ದರಿಂದ ವಿಪರೀತ ಹಿಂಸೆ ಅನುಭವಿಸಿದ. ಉದರಭರಣದ ಹಂಗಿನಿಂದಲೂ ಬಹಳ ಚಿಂತೆಪಟ್ಟ. ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಆಫೀಮು ಸೇವಿಸಲಾರಂಭಿಸಿದ. ಅದಕ್ಕೆ ಗುಲಾಮನಾಗಿ ಬದುಕು ಸಾಗಿಸಿದ. 16 ವರ್ಷ ಅವನಿಂದ ಯಾವ ಉತ್ತಮ ಗ್ರಂಥರಚನೆಯೂ ಆಗಲಿಲ್ಲ. ಯಂತ್ರೋದ್ಯಮ ಪ್ರವೀಣರಾದ ವೆಜ್‍ವುಡ್ ಸಹೋದರರ ವಾರ್ಷಿಕ ಕೊಡುಗೆಯಾದ 150 ಪೌಂಡು ಇವನ ಬಾಳಿಗೆ ಆಧಾರವಾಯಿತು. ಹೆಂಡತಿ ಮಕ್ಕಳನ್ನು ನೋಡಿಕೊಳ್ಳುವ ಭಾರ ಸೌದಿಯ ಮೇಲೆ ಬಿತ್ತು. ಆಮೇಲೆ ಲಂಡನ್ನಿಗೆ ಬಂದ ಕೋಲ್‍ರಿಜ್‍ಗೆ ಗಿಲ್ಮನ್ ಎಂಬೊಬ್ಬ ಸದ್‍ಗೃಹಸ್ಥನ ಆಶ್ರಯ ದೊರಕಿತು; ಸಾಹಿತಿಗಳ ಸಹವಾಸವೂ ಒಳ್ಳೆಯ ಪ್ರಮಾಣದಲ್ಲಿ ಸಿಕ್ಕಿತು. ಪರಿಣಾಮವಾಗಿ ಕೋಲ್‍ರಿಜ್ ಹೊಸ ಚೈತನ್ಯ ತುಂಬಿಕೊಂಡವನಾದ. ಆಫೀಮಿನ ಹಿಡಿತದಿಂದ ಬಹುಮಟ್ಟಿಗೆ ಬಿಡಿಸಿಕೊಂಡ. ಹಲವು ಉಪನ್ಯಾಸಗಳನ್ನು ಮಾಡಿದ. ಹಲವು ಪ್ರಬಂಧಗಳನ್ನು ಬರೆದ. ಅತ್ಯುತ್ತಮ ವಾಗ್ಮಿಯೆಂಬ ಕೀರ್ತಿ ಗಳಿಸಿದ. 1817ರಲ್ಲಿ ಹೊರಬಂದ ಇವನ ಕಾವ್ಯಮೀಮಾಂಸಾ ಗ್ರಂಥ ಗಾಢಾರ್ಥಗರ್ಭಿತವಾದದ್ದು, ಸ್ಫೂರ್ತಿದಾಯಕವಾದದ್ದು, ಮಾರ್ಗದರ್ಶನ ಮಾಡುವಂಥಾದ್ದು. ಕಾವ್ಯವಿಮರ್ಶೆಯಲ್ಲಿ ಅದೊಂದು ಪ್ರಸ್ಥಾನಕೃತಿ. 1825ರಲ್ಲಿ ಹೊರಬಂದ ಆಲೋಚನೆಗೆ ನೆರವುಗಳು ಎಂಬ ದಾರ್ಶನಿಕಗ್ರಂಥದ್ದೂ ಬಹುಮೇಲಿನ ಮಟ್ಟ..
ಒಟ್ಟಿನಲ್ಲಿ ಇವನ ಜೀವನ ಅತೀವವಾದ ಅತೃಪ್ತಿ, ಹತಾಶೆ, ಯಾತನೆಗಳಿಂದ ಕೂಡಿದ್ದಿತಾಗಿ ಆಗಬಹುದಾದಷ್ಟು ಕೃತಿರಚನೆ ಇವನಿಂದ ಆಗಲಿಲ್ಲ. ಲೋಕದ ದುರದೃಷ್ಟ ಅದು. ಆದರೂ ಇವನು ಬರೆದುದೆಲ್ಲ ಬಂಗಾರದಷ್ಟು ಅಮೂಲ್ಯವಾಗಿದೆ ಎಂಬ ಮಾತನ್ನು ನಾವು ಮರೆಯುವಂತಿಲ್ಲ.

ಕೃತಿಗಳು : ಲೇಖನನಾಗಿ ಕೋಲ್‍ರಿಜ್ ಮೊದಲು ಪದ್ಯರಚನೆ, ಆಮೇಲೆ ಸಾಹಿತ್ಯವಿಮರ್ಶೆ, ಕೊನೆಯಲ್ಲಿ ತತ್ತ್ವಜಿಜ್ಞಾಸೆಗಳಲ್ಲಿ ಆಸಕ್ತನಾದನೆಂಬ ಹೇಳಿಕೆ ವಾಡಿಕೆಗೆ ಬಂದಿತ್ತು, ಹೆಚ್ಚು ಕಡಿಮೆ ಅಂಗೀಕೃತವಾಗಿತ್ತು. ಆದರೆ ಆ ಬಗೆಯ ವಿಂಗಡನೆ ನಿಜಾಂಶಕ್ಕೆ ಒಪ್ಪಾಗದು. ತತ್ತ್ವಚಿಂತನೆ ಇವನ ಅಂತರ್ಯದಲ್ಲಿ ರೂಢಮೂಲವಾಗಿತ್ತು. ಹಾಗೆಯೇ ಪದ್ಯರಚನೆಯನ್ನು ಈತ ಎಂದೂ ಕೈಬಿಡಲಿಲ್ಲ. ಕಾವ್ಯರಚನೆ ಮಾಡದಿರುವ ಸಮಯದಲ್ಲಿ ಈತ ಕಾವ್ಯದ ವಿಚಾರವಾಗಿ ಆಲೋಚಿಸುತ್ತಿದ್ದ, ಚರ್ಚೆಗೈಯ್ಯುತ್ತಿದ್ದ. ಭಾಷಣ ಮಾಡುತ್ತಿದ್ದ. ಇವನ ಕವನಗಳ ಪುಸ್ತಕ 588 ಪುಟದಷ್ಟಿದೆ. ಆದರೆ ಇದು ಅಸಮಗ್ರ ಕೃತಿ; ಚೂರುಪಾರು, ಸಾಧಾರಣ ವಾಕ್ಯಪುಂಜಗಳಿಂದ ತುಂಬಿಕೊಂಡಿದೆ. 1797ರಿಂದ ಮೂರು ನಾಲ್ಕು ವರ್ಷ ಈತ ಕಾವ್ಯದೇವಿಯ ನೈಜಕುವರನಂತೆ ಆವೇಶಗೊಂಡಿದ್ದ. ಸುವರ್ಣಾಕ್ಷರದಲ್ಲಿ ಮುದ್ರಿಸತಕ್ಕ ಕಾವ್ಯಗಳನ್ನು ಕಟ್ಟಿದ. ಅದಕ್ಕೆ ಮುಂಚೆ, ಅದಾದ ತರುವಾಯ ಈತ ಬರೆದ ಕಾವ್ಯಗಳಲ್ಲೂ ಕಾವ್ಯ ತುಣುಕುಗಳಲ್ಲೂ ಹುಡುಕಿ ತೆಗೆದರೆ ಒಂದೊಂದು ಅತ್ಯುತ್ತಮವಾದದ್ದು. ಕೋಲ್‍ರಿಜ್ ಕವಿಯದೆನ್ನಬಹುದಾದದ್ದು ಸಿಕ್ಕೀತು. ಬರೆದು ಹೊಡೆದು ಮತ್ತೆ ಬರೆಯುವ ಅಭ್ಯಾಸ ಕೋಲ್‍ರಿಜ್‍ನನ್ನು ಯಾವಾಗಲೂ ಬಾಧಿಸುತ್ತಿತ್ತು; ಅದನ್ನು ಕೊಡವಿಕೊಳ್ಳುವ ಅಭಿಲಾಷೆ ಇವನಲ್ಲಿ ಎಂದಿಗೂ ಕಾಣಿಸಲಿಲ್ಲ. ಆದರೆ ಪ್ರಬಲ ಕಾವ್ಯ ಸ್ಫೂರ್ತಿ ಆಕ್ರಮಿಸಿಕೊಂಡಾಗ ಈತನ ಬಾಯಿಂದ ರಸವದ್ವಾಕ್ಯ ತಾವಾಗಿ ಉದುರುತ್ತಿದ್ದುವು; ಅವಕ್ಕೆ ಮಂತ್ರ ಸಹಜವಾದ ಮರುಳ್ಗೊಳಿಸುವ ತ್ರಾಣ ಬರುತ್ತಿತ್ತು.
ಕೋಲ್‍ರಿಜ್‍ನ ಪ್ರಥಮ ಕವಿತೆಗಳಲ್ಲಿ ಗ್ರೇ ಮತ್ತು ಬ್ಲೇಕ್ ಕವಿಗಳ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ. ಗ್ರೇ ಗಿಂತಲೂ ಹೆಚ್ಚಾಗಿ ಬ್ಲೇಕನೇ ಇವನಿಗೆ ಮೇಲ್ಪಂಕ್ತಿ. ಒಂದು ಹಗಲುಗನಸು, ಕೇನನ ಅಲೆದಾಟ, ಆತ್ಮಹಂತಕನ ವಾದ, ಸೈತಾನನ ಚಿಂತನೆಗಳು-ಮೊದಲಾದ ಕವಿತೆಗಳಲ್ಲಿ ಬ್ಲೇಕನ ಮಬ್ಬು ಮಸಕುಗಳ ಜೊತೆಗೆ ಅವನಲ್ಲಿಲ್ಲದ ಪಾಂಡಿತ್ಯ ಗಂಭೀರತೆಗಳ ಛಾಯೆಯೂ ಇದೆ. ಬೇಗ ಬೇಗ ಕೋಲ್‍ರಿಜ್‍ನಲ್ಲಿ ಸ್ವಂತಿಕೆ ಬೆಳೆದು ಬಂತು. ಯೌವನ ವೃದ್ಧಾಪ್ಯ, ಪ್ರೇಮಗೀತೆಗಳು, ಒಬ್ಬನೇ ಇರುವಾಗ ಅಡಸುವ ಅಂಜಿಕೆಗಳು ಇತ್ಯಾದಿ ರಚನೆಗಳಲ್ಲಿ ಕವಿಯ ಆತಂಕಮಯವಾದ ಬದುಕೂ ಅತ್ಯುತ್ತಮವೂ ಗಂಭೀರವೂ ರಾಗಯುಕ್ತವೂ ಆದ ವಿಭಾವನಾ ಪ್ರಸಾರವೂ ಕಾವ್ಯಮಯ ಭಾಷೆಯೂ ಚೆನ್ನಾಗಿ ಎದ್ದು ಕಾಣುತ್ತವೆ. ವೈವಿಧ್ಯ ಸಾಕಷ್ಟು ಇರುವುದರಿಂದ ಓದುಗರು ತಮ್ಮ ತಮ್ಮ ಮನಸ್ಸಿಗೂ ಅಭಿರುಚಿಗೂ ಮೆಚ್ಚಾದುವನ್ನು ಆರಿಸಿಕೊಳ್ಳಬಹುದು. ಮೂರು ಸಮಾಧಿಗಳು. ಅಜ್ಞಾತ ಮಹಿಳೆ ಇತ್ಯಾದಿ ಲಾವಣಿಗಳು ಅಪೂರ್ಣವಾಗಿದ್ದರೂ ಕವಿಯ ಕಥನಸಾಮಥ್ರ್ಯ ಕುರುಹುಗಳಾಗಿವೆ. ಕೋಲ್‍ರಿಜ್‍ನ ಹೆಸರನ್ನು ಅಮರವಾಗಿಸಿರುವ ಕಾವ್ಯಗಳು ಮೂರು; ಅವುಗಳಲ್ಲಿ ಎರಡು ಅಪೂರ್ಣ. ಅವನ್ನು ಪೂರ್ತಿ ಮಾಡುವ ಕೆಲಸವನ್ನು ನಾಳೆ ಮಾಡೋಣವೆಂದು ಕೋಲ್‍ರಿಜ್ ಹೇಳುತ್ತಲೇ ಇದ್ದನಾದರೂ ಆ ನಾಳೆ ಮಾತ್ರ ಉದಿಸಿ ಬರಲೇ ಇಲ್ಲ.

ರೈಮ್ ಆಫ್ ದಿವನ್‍ಷೆಂಟ್ ಮ್ಯಾರಿನರ್ (ಹಳೆಗಾಲದ ನಾವಿಕನ ಪದ)ವೆಂಬುದನ್ನು ಎಷ್ಟು ಹೊಗಳಿದರೂ ತೀರದು. ಕಥೆಯಲ್ಲಿ ಜರುಗುವ ಕಾರ್ಯಭಾರ ಬಲು ಕಿರಿದು. ಇನ್ನೂರು ಮಂದಿ ನಾವಿಕರ ಯಾನ; ನೌಕೆ ಬಿರುಗಾಳಿಗೆ ಸಿಕ್ಕಿ ದಕ್ಷಿಣ ದಿಕ್ಕಿಗೆ ಉರುಳುವುದು; ಆಲ್ಬೆಟ್ರಾಸ್ ಎಂಬ ಕಡಲಪಕ್ಷಿ ಬಂದು ಅವರ ಜೊತೆ ಇರುವುದು; ನಾವಿಕನೊಬ್ಬ ದುಷ್ಟಚಾಪಲ್ಯಕ್ಕೀಡಾಗಿ ಅದನ್ನು ಗುಂಡಿಕ್ಕಿ ಕೊಲ್ಲುವುದು; ಮಂಜು ಮೋಡಗಳ ಹಾವಳಿ; ಆಮೇಲೆ ನೌಕೆಯ ಸುಗಮಯಾನ; ಪಕ್ಷಿಯನ್ನು ನಾವಿಕ ಕೊಂದದ್ದು ಸರಿಯೆಂದು ಉಳಿದೆಲ್ಲರ ಸಮರ್ಥನೆ; ದಕ್ಷಿಣ ಧ್ರುವದತ್ತ ನೌಕೆಯ ಓಟ; ಇದ್ದಕ್ಕಿದ್ದಂತೆ ಏನೇನೂ ಗಾಳಿ ಬೀಸದೆ ನೌಕೆ ನಿಂತಲ್ಲೇ ನಿಲ್ಲುವುದು; ಉರಿ ಬಿಸಿಲು, ಪ್ರಚಂಡ ಧಗೆ, ಕುಡಿಯಲು ಒಂದು ತೊಟ್ಟು ನೀರಿಲ್ಲದಿರುವುದು; ಅನ್ಯಾಯಕಾರಿ ನಾವಿಕನೊಬ್ಬನನ್ನು ಬಿಟ್ಟು ಮಿಕ್ಕೆಲ್ಲರ ಮರಣ; ಅವನ ಭಾರಿ ಸಂಕಟ; ತೀವ್ರ ಪಶ್ಚಾತ್ತಾಪ; ಕೊನೆಗೆ ತನ್ನ ಊರಿನ ಬಳಿಗೆ ಅವನ ಆಗಮನ; ಜೋಗಿಯೊಬ್ಬನಿಂದ ಅವನಿಗೆ ಪಾಪ ವಿಮೋಚನೆ; ತನ್ನ ಕಥೆಯನ್ನು ಹೇಳುತ್ತ ಅಲ್ಲಿ ಇಲ್ಲಿ ಅವನು ಸುತ್ತಾಡಬೇಕೆಂದ ವಿಧಿ-ಇದು ಆ ಕಥೆಯ ಮುಖ್ಯ ಘಟ್ಟಗಳು. ಕಥೆಗೆ ನಾನಾ ಮಾನವಾತೀತ ವಸ್ತು, ವ್ಯಕ್ತಿಗಳಿಂದ ಕವಿ ಪುಷ್ಟಿಕೊಟ್ಟಿದ್ದಾನೆ. ಅಸ್ಥಿಪಂಜರದಂಥ ಹಡಗು, ಅದನ್ನು ನಡೆಸುವ ಮೃತ್ಯು ಮತ್ತು ಪಿಶಾಚಿ ಜೀವನ್ಮøತ್ಯು, ಅವರಿಬ್ಬರ ಪಗಡೆಯಾಟ, ದೇವದೂತರ ತಂಡ, ಹೆಣಗಳು ಎದ್ದು ಸದ್ದು ಮಾಡದೆ ನೌಕಾಕಾರ್ಯಗಳಲ್ಲಿ ತೊಡಗುವುದು, ಮಳೆಗಾಳಿಗಳ ಅಲೌಕಿಕ ಅಬ್ಬರ, ದಕ್ಷಿಣ ಧ್ರುವದ ಭೂತ-ಮುಂತಾದವು ಬಂದರೂ ಕೋಲ್‍ರಿಜ್‍ನ ಮಾಂತ್ರಿಕಶೈಲಿಯಿಂದ ಅವೆಲ್ಲ ನಂಬಿಕೆಯನ್ನು ಹುಟ್ಟಿಸುವಂತಿದೆ. ಯಥಾರ್ಥವೋ ಎಂಬಂತೆ ಪದ ಪ್ರಾಸ ಛಂದಸ್ಸು ನಾದಮಾಧುರ್ಯ ಎಲ್ಲವೂ ಅತ್ಯುತ್ಕøಷ್ಟವಾಗಿಲ್ಲಿ ಮೂಡಿ ಬಂದಿವೆ. ಕೆಲವೇ ಕೆಲವು ಚಿಕ್ಕ ಮಾತುಗಳಲ್ಲಿ ಚೆಲುವಾದ ಚಿತ್ರ ರೂಪಗೊಳ್ಳುತ್ತದೆ. ದೆವ್ವಭೂತಾದಿ ಪ್ರಪಂಚದ ಘೋರ ಭಯಾನಕಗಳ ವಿರೂಪವನ್ನು ಸೌಮ್ಯಗೊಳಿಸಿ ಸಾರವತ್ತಾಗಿಸುವ ಲಲಿತಕೃಷಿ ಕೋಲ್‍ರಿಜ್‍ಗೆ ಪರಿಪಾಠವಾಗಿತ್ತು.

ಕ್ರಿಸ್ಟಬೆಲ್ ಕಥೆಯಲ್ಲಿ ಮಹಾ ಮಾಟಗಾತಿ ಜೆರಲ್ಡೈನಳ ಪಾತ್ರ ರುದ್ರಮನೋಹರವಾಗಿ ರೂಪುಗೊಂಡಿದೆ. ಸರ್ ಲಿಯೊಲೈನನ ಕುವರಿ ಕ್ರಿಸ್ಟಬೆಲ್ ದೂರದೇಶದಲ್ಲಿರುವ ತನ್ನ ಪ್ರಿಯನ ಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಲು ನಡುರಾತ್ರಿ ದುರ್ಗದ ಹೊರಗಣ ಕಾನನಕ್ಕೆ ಹೋಗುತ್ತಾಳೆ. ಅಲ್ಲಿ ಮರದ ಅಡಿಯಲ್ಲಿ ನರಳುತ್ತ ಬಿದ್ದಿರುವ ಬಿಳಿಬಟ್ಟೆಯ ಅಪೂರ್ವ ಲಾವಣ್ಯವತಿಯೊಬ್ಬಳನ್ನು ಈಕ್ಷಿಸುತ್ತಾಳೆ. ಧೂರ್ತರು ತನ್ನನ್ನು ಎಳೆದು ತಂದು ಅಡವಿ ಪಾಲು ಮಾಡಿ ಹೋದರೆಂದು ಅವಳು ಶೋಕಿಸುತ್ತಾಳೆ. ಅವಳನ್ನು ಜೊತೆಯಲ್ಲಿ ಕರೆದುಕೊಂಡು ಬರುತ್ತಾಳೆ, ಸರಳ ಮನಸ್ಸಿನ ಕ್ರಿಸ್ಟಬೆಲ್. ಮನೆಯ ಹೊಸ್ತಿಲ ಬಳಿ ಜೆರಲ್ಡೈನ್ ಕುಸಿದು ಬೀಳುತ್ತಾಳೆ. ಆಯಾಸದಿಂದಲೊ ಎಂಬಂತೆ. ಕ್ರಿಸ್ಟಬೆಲ್ ಅವಳನ್ನು ಎತ್ತಿಕೊಂಡು ಹೊಸ್ತಿಲು ದಾಟಿಸುತ್ತಾಳೆ. ಶಯನಕ್ಕೆ ಮುನ್ನ ಅವಳು ಲಂಗವನ್ನು ಕಳಚಿ ಎಸೆದಾಗ ಅವಳ ವಿಕಾರವಾದ ವಕ್ಷಸ್ಥಳ ಮತ್ತು ದೇಹದ ಒಂದು ಪಕ್ಕ ಕ್ರಿಸ್ಟಬೆಲ್ಲಳ ಕಣ್ಣಿಗೆ ಬಿದ್ದು ನಡುಕ ಹುಟ್ಟಿಸುತ್ತವೆ. ಆದರೆ ಯತ್ನವಿಲ್ಲ. ಜೆರಲ್ಡೈನ್ ಅವಳನ್ನು ತಬ್ಬಿಕೊಂಡು ಮಲಗಿ `ಈ ಆಲಿಂಗನದಿಂದ ನೀನಿನ್ನು ನನ್ನ ಅಧೀನೆ; ನಾನು ಹೇಳಿದಂತೆಯೇ ಹೇಳದೆ ಮತ್ತೇನನ್ನು ಹೇಳಲಾಗದ ಬಂಧನ ನಿನ್ನ ನಾಲಗೆಯನ್ನು ಒತ್ತುತ್ತಿದೆ ಎಂದು ಹೇಳುತ್ತಾಳೆ. ಮಾರನೆಯ ದಿವಸ ತಂದೆ ಸರ್ ಲಿಯೊಲೈನಿಗೆ ಅಭ್ಯಾಗತೆಯನ್ನು ಪರಿಚಯಿಸುತ್ತಾಳೆ. ಆಕೆ ತನ್ನ ಹಳೆಯ ಗೆಳೆಯ ಸರ್ ರೋಲಂಡನ ಮಗಳು-ಅದು ಜೆರಲ್ಡೈನಳ ಸುಳ್ಳು-ಎಂಬುದನ್ನು ಕೇಳಿ ಲಿಯಲೈನಿಗೆ ಒಂದು ಕಡೆ ಹರ್ಷ, ಇನ್ನೊಂದು ಕಡೆ ದು:ಖ. ತನ್ನ ಆಸ್ಥಾನದ ಚಾರಣ ಬ್ರೇಸಿಯನ್ನು ಸುದ್ದಿ ಕೊಡಲು ಕಳಿಸುತ್ತಾನೆ: ಆ ಧೂರ್ತರನ್ನು ಶಿಕ್ಷಿಸಲು ಡಂಗುರ ಹಾಕಿಸುತ್ತಾನೆ. ಈ ಮಧ್ಯೆ ಕ್ರಿಸ್ಟಬೆಲ್ ಮೂಕಳಂತೆ ಬರಿ ಸನ್ನೆಯಿಂದ ಜೆರಲ್ಡೈನಳ ನಿಜತ್ವವನ್ನು ತಿಳಿಸಲು ಪ್ರಯತ್ನಿಸುತ್ತಾಳೆ, ವ್ಯರ್ಥವಾಗಿ. ಇಲ್ಲಿಗೆ ಎರಡನೆಯ ಭಾಗ ಮುಗಿಯುತ್ತದೆ. ಕೋಲ್‍ರಿಜ್ ಕಾವ್ಯವನ್ನು ಇಲ್ಲಿಗೇ ಮೊಟಕಿಸಿ ಬಿಟ್ಟಿದ್ದಾನೆ. ವಿಚಿತ್ರ ಮೋಹಕತೆಯ ವಾಕ್ಯಗಳೂ ಕಾವ್ಯಭಾಗಗಳೂ ಅಸಮಗ್ರ ಕೃತಿಗೆ ಬೆಡಗು ಕೊಟ್ಟಿವೆ. ಬಣ್ಣಿಸಲಾಗದ ಯಾವುದೋ ದೊಡ್ಡ ಭೀತಿ ಕಾವ್ಯದ ಸುಂದರ ಹೊಂದಾಣಿಕೆಯ ಪರಿವೇಷಣವನ್ನೊದಗಿಸಿದೆ.

ಕುಬ್ಲಖಾನ್ ಎಂಬ 56 ಸಾಲುಗಳ ಕಿರುಕವನ ಕಣ್ಣು ಕೋರೈಸುವ ಒಂದು ಕಾವ್ಯ ವಜ್ರ. ಕೋಲ್‍ರಿಜ್ ಒಂದು ಬೆಳಗ್ಗೆ ಪರ್ಚಾಸ್ ಎಂಬಾತನ ಪ್ರವಾಸ ಚರಿತ್ರೆಯನ್ನು ಓದುತ್ತ ಹಾಗೆಯೇ ಅರ್ಧನಿದ್ರೆಗೆ ಬಿದ್ದ. ಕನಸಿನಲ್ಲಿ ಪದ್ಯ ಕಟ್ಟುತ್ತ ಹೋದ; ಸುಮಾರು ಮುನ್ನೂರು ಪಂಕ್ತಿಗಳಷ್ಟನ್ನು ಕಟ್ಟಿದಂತೆ ಅವನ ಆ ಮೇಲಣ ನೆನಪು. ಜಾಗೃತನಾದೊಡನೆ ಬರೆಯಲಾರಂಭಿಸಿದ. 54 ಸಾಲನ್ನು ಬರೆಯುವ ಹೊತ್ತಿಗೆ ಯಾರೋ ಬಂದು ಕೆಲಸದ ಮೇಲೆ ಅವನನ್ನು ಕರೆದೊಯ್ದರಂತೆ. ಹಿಂದುರುಗಿ, ಬರೆಯಲು ಅಪೇಕ್ಷಿಸಿದಾಗ ಕನಸು ಎಲ್ಲಿಯೋ ಮಾಯವಾಗಿತ್ತು; ಎಷ್ಟು ತಿಣಿಕಿದರೂ ಯುಕ್ತವಾಕ್ಯವೊಂದೊ ಕೋಲ್‍ರಿಜ್‍ಗೆ ದೊರಕಲಿಲ್ಲ. ಕ್ಸಾನಡುವಿನ ಅರಸ ಕುಬ್ಲಖಾನ್ ಸಮ್ಮೋದ ಸೌಧವೊಂದನ್ನು ಪವಿತ್ರನದಿ ಆಲ್ಫ್‍ದ ತೀರದಲ್ಲಿ ನಿರ್ಮಿಸಲು ಆಶಿಸುವುದು, ಆ ಸೌಧದ ಪರಮವೈಭವದ ವರ್ಣನೆ, ಕೇವಲ ಸ್ವಪ್ನಲಭ್ಯೆಯಾದ ಅಬಿಸೀನಿಯ ಕನ್ಯೆಯ ಗಾಯನದ ದಂದುಗ-ಇತ್ಯಾದಿ ಕೌತುಕಗಳಿಂದಲೇ ನಾವು ತೃಪ್ತರಾಗಬೇಕಾಗಿದೆ. ಏಕೆಂದರೆ ಕಾವ್ಯ ಅಸಮಗ್ರ.

ಗದ್ಯಗ್ರಂಥಗಳು : ಮತಧರ್ಮ ತತ್ತ್ವಶಾಸ್ತ್ರಗಳನ್ನು ಅವಲಂಬಿಸಿದ ಹಲವು ಲೇಖನಗಳಿಗೆ ಕೋಲ್‍ರಿಜ್ ತನ್ನ ಕಾಲವನ್ನೂ ಆಸಕ್ತಿಯನ್ನೂ ಸ್ವಲ್ಪ ಹೆಚ್ಚಾಗಿಯೇ ವಿನಿಯೋಗಿಸಿದ. ಜರ್ಮನ್ ದಾರ್ಶನಿಕರು ಪ್ರಚುರಗೊಳಿಸಿದ್ದ ಆದರ್ಶವಾದ ಇಂಗ್ಲೆಂಡಿನಲ್ಲೂ ಪ್ರಸಾರವಾಗುವುದಕ್ಕೆ ಇವನೇ ಮುಖ್ಯ ಕಾರ್ಯಕರ್ತನಾದ ಎಂಬುದು ಸತ್ಯ. ಸಾಹಿತ್ಯವಿಮರ್ಶೆಗೆ ಸಂಬಂಧಿಸಿದಂತೆ ಇವನ ಪುಸ್ತಕಗಳು ಪ್ರಮುಖವಾಗಿ ಮೂರು. ಷೇಕ್ಸ್‍ಪಿಯರನ ಮೇಲಿನ ಉಪನ್ಯಾಸಗಳು ಎಂಬುದು ಆ ಮಹಾಕವಿಯನ್ನು ಕುರಿತು ಪಡೆಮಾತಾಗಿದ್ದ ಹೇಳಿಕೆಗಳನ್ನು ಕಸದಂತೆ ಗುಡಿಸಿ ಹಾಕಿತು. ನಿಯಮ ಸಂಪ್ರದಾಯ ಪ್ರಾಚೀನರ ಪದ್ಧತಿ ಮುಂತಾದ ಅಳತೆಗೋಲು ಷೇಕ್ಸ್‍ಪಿಯರಿಗೆ ಅನ್ವಯಿಸಲಾರದು; ಅವನ ನಾಟಕಗಳಿಂದಲೇ ಅವನ ಸ್ವಕೀಯ ಕಾವ್ಯವಿಧಾನವನ್ನು ಗುರ್ತಿಸತಕ್ಕದ್ದು; ಯಾವುದನ್ನು 17, 18ನೆಯ ಶತಮಾನಗಳು ಅವನಲ್ಲಿ ದೋಷಗಳೆಂದು ಕರೆದುವೊ ಅವು ದಿಟವಾಗಿ ಅವನ ಗುಣಗಳು; ಅವನ ವರ್ಣನೆಯೆಲ್ಲ ಮಾನವತೆಗೆ ಸಂಪೂರ್ಣವಾಗಿ ಹೊಂದಿಕೊಂಡದ್ದು; ಭಾಷೆಯ ಮೇಲಣ ಅಧಿಪತ್ಯ ಅವನಿಗಿದ್ದಷ್ಟು ಬೇರಾರಿಗೂ ಇಲ್ಲ; ಕಾವ್ಯತ್ವದ ಸಹಜ ಘನತೆಗೆ ಅವನೇ ಮಹೋತ್ತಮ ನಿದರ್ಶನ. ಹೀಗೆ ಸಾಧಾರಣವಾಗಿ ಸಮರ್ಥನಗೈದು ಷೇಕ್ಸ್‍ಪಿಯರ್ ಆರಾಧನೆಗೆ ಹಿರಿಯ ಅರ್ಚಕನಾದ, ಕೋಲ್‍ರಿಜ್.
ಇವನ ಸಂಭಾಷಣೆ ಕುಶಲಪತ್ರ ಇತ್ಯಾದಿಯಲ್ಲಿ ಅನೇಕ ಉಪಯುಕ್ತ ನಿರ್ಧಾರಗಳ ಸಲಹೆಗಳೂ ಇವೆ. ಸಾಹಿತ್ಯಾಭ್ಯಾಸಿಗಳಿಗೆ ಅವು ಅತ್ಯಾವಶ್ಯಕ.

ಕೋಲ್‍ರಿಜ್‍ಗೆ ಇಂಗ್ಲಿಷ್ ವಿಮರ್ಶಕರಲ್ಲಿ ಅಗ್ರಪೀಠವನ್ನೂ ಪಾಶ್ಚಾತ್ಯ ವಿಮರ್ಶಕ ಶ್ರೇಷ್ಠರ ಪಂಕ್ತಿಯಲ್ಲಿ ಗಣ್ಯಪೀಠವನ್ನೂ ತಂದುಕೊಟ್ಟಿರುವ ಗ್ರಂಥಕ್ಕೆ ಬಯೊಗ್ರಾಫಿಯ ಲಿಟರರಿಯ ಎಂದು ಹೆಸರು. ಸಾಹಿತಿಯಾಗಿ ಇವನ ಬಾಳನ್ನು, ಸಾಹಿತ್ಯದ ವಿಚಾರವಾಗಿ ಇವನ ಅಭಿಪ್ರಾಯಗಳನ್ನು ಅದು ಪ್ರಾಸಂಗಿಕವಾದರೂ ಸರಣಿಗೆಡದಂತೆ, ಕ್ಲಿಷ್ಟವಾದರೂ ಸ್ಪಷ್ಟವಾಗಿ ವಿವರಿಸುತ್ತದೆ. ಎರಡು ಮುಖ್ಯ ವಿಚಾರಗಳನ್ನು ತೆಗೆದುಕೊಳ್ಳೋಣ: ಕಾವ್ಯದ ನುಡಿನಡೆ (ಪೊಯಟಿಕ್ ಡಿಕ್ಷನ್) ಕವಿ ವಿಭಾವನೆ (ಪೊಯಟಿಕ್ ಇಮ್ಯಾಜಿನೇಷನ್). 1798 ರಲ್ಲಿ ಹೊರಬಂದ ಗೀತಾತ್ಮಕ ಲಾವಣಿಗಳು ಎಂಬುದಕ್ಕೆ ಮುನ್ನುಡಿ ಬರೆಯುತ್ತ ವರ್ಡ್ಸ್‍ವರ್ತ್ ಪದ್ಯದ ಭಾಷೆಗೂ ಗದ್ಯದ ಭಾಷೆಗೂ ಯಾವ ವ್ಯತ್ಯಾಸವೂ ಇಲ್ಲ, ರೈತರೂ ಅವರಂಥ ಇತರ ಸಾಮಾನ್ಯರೂ ಆಡುವ ಮಾತಿನಲ್ಲಿ ಕಾವ್ಯತನವಿದೆ ಎಂದು ಹೇಳಿದ. ಕೋಲ್‍ರಿಜ್ ಆ ವಚನಗಳನ್ನು ಅಕ್ಷರಶ: ತೆಗೆದುಕೊಂಡು ಅವನ್ನು ಒಪ್ಪಲಾಗದು ಎಂದು ಟೀಕೆ ಮಾಡಿದ. ಬರಿ ಪದಗಳ ವಿಚಾರದಲ್ಲಿ ಗದ್ಯವಾಗಲಿ ಪದ್ಯವಾಗಲಿ ಅವಕ್ಕೆ ಒಂದೇ ನಿಘಂಟಿನಿಂದ ಸಾಮಗ್ರಿ ಬರುತ್ತದೆ ಎಂಬುದೇನೊ ದಿಟ; ಆದರೆ ಪದ್ಯಕವಿ ಶಬ್ದಗಳನ್ನು ಆರಿಸಿಕೊಳ್ಳತ್ತಾನೆ; ಅಲ್ಲದೆ ಅವನ್ನು ವಿಶಿಷ್ಟ ರೀತಿಯಲ್ಲಿ ಜೋಡಿಸುತ್ತಾನೆ; ಹೀಗಾಗಿ ಪದ್ಯದ ನುಡಿನಡೆ ಬೇರೆ-ಇದು ಕೋಲ್‍ರಿಜ್‍ನ ಅಭಿಮತ. ವರ್ಡ್ಸ್‍ವರ್ತ್ ಯಾವ ಬಗೆಯ ನುಡಿನಡೆಯನ್ನು ಕೃತಕ, ಚರ್ವಿತ ಚರ್ವಣ, ನೀರಸವೆಂದು ಹಳಿದಿದ್ದನೊ ಅದನ್ನು ಕೋಲ್‍ರಿಜ್‍ನೂ ಖಂಡಿಸಿದ.

ವಿಭಾವನೆಯದು ಕಾವ್ಯೋತ್ಪತ್ತಿಗೆ ಸಂಬಂಧಿಸಿದ ಗೂಢಗಹನ ವಿಚಾರ. ಅದರ ಜಿಜ್ಞಾಸೆಗೆ ಅಗತ್ಯವಾದ ಜ್ಞಾನ ಅನುಭವ ಪರ್ಯಲೋಚನೆ ಶಬ್ದಕೋಶ ಎಲ್ಲವೂ ಕೋಲ್‍ರಿಜ್‍ನಲ್ಲಿ ತುಂಬಿಕೊಂಡಿತ್ತು. ಜರ್ಮನ್ ತತ್ತ್ವಜ್ಞರ ಮೇಲ್ಪಂಕ್ತಿಯ ಸಹಾಯವೂ ಇವನಿಗೆ ಕೂಡಿಬಂದು ಇವನ ವಿವರಣೆ ಸೂತ್ರಪ್ರಾಯವಾಯಿತು. ಇಲ್ಲೂ ವಿಭಾವನೆ (ಇಮ್ಯಾಜಿನೇಶನ್) ಮತ್ತು ಕಲ್ಪನೆ (ಫ್ಯಾನ್ಸಿ) ಎಂಬ ಪದಗಳನ್ನು ವರ್ಡ್ಸ್‍ವರ್ತ್ ಬಳಸಿಕೊಂಡ ರೀತಿಯನ್ನು ಹಿಕ್ಕಿನೋಡುವ ಉದ್ದೇಶದಿಂದ ಕೋಲ್‍ರಿಜ್ ತನ್ನ ಪ್ರಬಂಧವನ್ನು ಪ್ರಾರಂಭಿಸಿದ, ಕಡೆಗೆ ಇಬ್ಬರ ಅಭಿಪ್ರಾಯವೂ ಸರಿಸುಮಾರಾಗಿ ಒಂದೇ ಆದರೂ ವರ್ಡ್ಸ್‍ವರ್ತನದು ಸಾಧಾರಣ ಪ್ರಜ್ಞೆಯ ರಸಾಸ್ವಾದಿಯದು, ಕೋಲ್‍ರಿಜ್‍ನದು ತಾತ್ತ್ವಿಕ ಪ್ರಜ್ಞೆಯ ರಸಾಸ್ವಾದಿಯದು. ಕೋಲ್‍ರಿಜ್‍ನ ಹೇಳಿಕೆಯ ರೀತಿ ಇದು: ವಿಭಾವನೆಗೆ ಎರಡು ಮುಖ, ಎರಡು ವಿಧದಲ್ಲಿ ಅದರ ಕೆಲಸ ನಡೆಯುತ್ತದೆ. ಒಂದು ಮೂಲ ವಿಭಾವನೆ, ಇನ್ನೊಂದು ಉಪವಿಭಾವನೆ. ಜ್ಞಾನೇಂದ್ರಿಯಗಳ ಅನುಭವದ ಮೂಲಕ ಪದಾರ್ಥಗಳ ಅರಿವು ಮನಸ್ಸಿಗೆ ಉಂಟಾಗುತ್ತದೆ; ಆ ಅರಿವನ್ನು ವಿಶ್ಲೇಷಿಸಿ ಪುನಃ ಜೋಡಿಸಿ ಆಲೋಚನೆ, ಅಭಿಪ್ರಾಯ ಇತ್ಯಾದಿ ಭಾವನೆಗಳನ್ನು ಉತ್ಪತ್ತಿ ಮಾಡುವ ಕೆಲಸ ಬುದ್ಧಿ, ವಿವೇಕಕ್ಕೆ ಸೇರಿದ್ದು. ಹಾಗೆಯೇ ಮೂಲವಿಭಾನೆಯಿಂದ ಬಂದದ್ದನ್ನು ವಿಭಜಿಸಿ ಪುನಃ ಜೋಡಿಸಿ ಆಕೃತಿಗಳನ್ನಾಗಿಸುವ ಕಾರ್ಯ ಉಪವಿಭಾವನೆಗೆ ಸೇರಿದ್ದು. ಆದ್ದರಿಂದ ಕವಿಯೊ ಕಲಾವಿದನೊ ಎಸಗುವುದು ನಿಸರ್ಗ ದ್ರವ್ಯಗಳ ಬರಿ ಅನುಕರಣೆಯಲ್ಲ; ನಕಲಲ್ಲ, ಹೊಸ ಬಗೆಯ ದ್ರವ್ಯಗಳ ನಿರ್ಮಾಣ ಅಥವಾ ಸೃಷ್ಟಿ. ಅರಿಸ್ಟಾಟಲನ ಕಾಲದಿಂದಲೂ ಕಲಾವಿಮರ್ಶೆಯಲ್ಲಿ ಅಂಗೀಕೃತ ತತ್ತ್ವವಾಗಿದ್ದ ಅನುಕರಣೆ ಎಂಬುದರ ಬದಲು ಸೃಷ್ಟಿ ಎಂಬುದು ಬಳಕೆಗೆ ಬರುವಂತೆ ಮಾಡಿದ್ದು ಕೋಲ್‍ರಿಜ್‍ನ ಹಿರಿಮೆ. ಕಲೆಗೂ ನಿಸರ್ಗಕ್ಕೂ ವಿರೋಧ ಬಗೆಯಲಿಲ್ಲ ಕೋಲ್‍ರಿಜ್; ಹೊಂದಾಣಿಕೆಯನ್ನೇ ಸಾಧಿಸಿದ. ನಿಸರ್ಗದ ಬಾಹ್ಯಲಕ್ಷಣಗಳನ್ನು ಪ್ರತಿಬಿಂಬಿಸುವ ಕೆಲಸವೇ ಕಲಾವಿದನದ್ದೂ ಆದರೆ ಅದೆಂಥ ನಿಷ್ಪ್ರಯೋಜಕ ಹುರುಡು? ನಿಸರ್ಗದ ಆಂತರ್ಯಸತ್ಯವನ್ನು ಭಾವಿಸಿಕೊಂಡು ಅದರ ಪೂಣಾರೂಪವನ್ನು ಸೂಕ್ತಮಾಧ್ಯಮದ ಮೂಲಕ ಬಿಂಬಿಸುವುದೇ ಅವನ ಜವಾಬ್ದಾರಿ. ಹಲವು ಬಗೆಯ ದ್ವಂದ್ವತತ್ತ್ವಗಳನ್ನು ವಿಭಾವನೆ ಅನುರೂಪವಾಗಿ ಸಮನ್ವಯಿಸುತ್ತದೆ. ಒಂದಾಗಿಸುತ್ತದೆ: ನವೀನ; ಜಡತೆ-ಚಲನೆ; ವಿವೇಕ-ಉತ್ಸಾಹ; ಅಭಿಪ್ರಾಯ-ಪ್ರತಿಮೆ; ಚಿಂತನೆ-ಭಾವಾವೇಶ; ಪ್ರಾತಿನಿಧಿಕ-ವೈಯಕ್ತಿಕ; ಏಕರೂಪ-ವ್ಯತ್ಯಾಸ; ಕೃತಕ-ಸಹಜ; ಮಾನವಿಕ-ಮಾನವಾತೀತ ಕವಿ-ಅವನ ಕಾವ್ಯ; ಕಲೆ-ಜೀವನ; ಇತ್ಯಾದಿ. ರೋಮ್ಯಾಂಟಿಕ್ ಕಾವ್ಯದ ಸ್ವರೂಪವನ್ನು ಮಾತ್ರ ಕೋಲ್‍ರಿಜ್ ವರ್ಣಿಸಿದ ಎಂಬೊಂದು ಆಕ್ಷೇಪ ಕೆಲಕಾಲ ತಲೆಯುತ್ತಿತ್ತು; ಆದರೆ ಅದು ಮಿಥ್ಯಾರೋಪ. ಯಾವುದನ್ನು ಕಾವ್ಯ ಅಥವಾ ಕಲೆ ಎನ್ನುತ್ತೇವೆಯೊ ಅದರ ಬೇರಿಗೆ ಸಂಬಂಧಪಟ್ಟ ಸರ್ವವ್ಯಾಪಿಯೂ ಶಾಶ್ವತವೂ ಆದ ಸಿದ್ಧಾಂತಗಳ ಭಂಡಾರ-ಬಯೋಗ್ರಾಫಿಯ ಲಿಟರರಿಯ.

ಕೋಲ್‍ರಿಜ್‍ನ ಪ್ರಯೋಗಿಕ ವಿಮರ್ಶೆ ಅವನ ಇತರ ಲೇಖನಗಳಲ್ಲಿ ಬಿಡಿಹೇಳಿಕೆಯಾಗಿಯೂ ಹಲಕೆಲವು ಪುಟದ ಕಿರುನಿಬಂಧವಾಗಿಯೂ ಹೊರಬಂದಿದೆ. ಆ ಹೊತ್ತಗೆಗಳಲ್ಲಿ ಮುಖ್ಯವಾದದ್ದು `ಕಾವ್ಯದ ಜೀವಾತ್ಮ. ಈತ ದಿನಚರಿಯ ರೀತಿಯಲ್ಲಿ ಗುರುತು ಹಾಕಿಡುತ್ತಿದ್ದ ಟಿಪ್ಪಣಿಗಳ ಸಂಕಲನ ಅದು; ಅಲ್ಲಿ ಅತ್ಯುತ್ತಮ ಗದ್ಯವಿದೆ. ಮಾದರಿಗಾಗಿ ಕೆಲವು ವಾಕ್ಯಗಳನ್ನು ಇಲ್ಲಿ ಕೊಡಬಹುದು; ಡಾಂಟೆಯನ್ನು ನಿಧಾನವಾಗಿ ಮೆಲಕು ಹಾಕಿ ಅರ್ಥ ಮಾಡಿಕೊಳ್ಳಬೇಕು; ಬೈರನ್ನನ ಬರೆಹ ಎಲ್ಲೆಲ್ಲೂ ವೈಭವಯುಕ್ತ. ಆದರೆ ಎಲ್ಲೂ ಕಾವ್ಯವಲ್ಲ; ಕೆಲವರಿಗೆ ತಮ್ಮ ಬರೆವಣಿಗೆ ಎಷ್ಟು ದೂರ ಹೋಗಬಹುದೊ ಅಷ್ಟೇ ಸಾಲದು, ಅದಕ್ಕೂ ಮುಂದೆ ಹೋಗಬೇಕೆಂಬ ದುರಾಶೆ; ವಿಭಾವನೆ ಅನೇಕವನ್ನು ಒಂದಾಗಿ ಮಾಡುವ ಶಕ್ತಿ (ಎಸೆನೊ ಪ್ಲಾಸ್ಟಿಕ್ ಪವರ್). ಈ ಪ್ರಸಂಗದಲ್ಲಿ ಕೋಲ್‍ರಿಜ್ ಉಪಯೋಗಿಸಿರುವ ಎಸೆನೊಪ್ಲಾಸ್ಟಿಕ್ ಪದ ಬಯೋಗ್ರಾಫಿಯದಲ್ಲಿ ಅವನು ಬಳಸಿಕೊಂಡ ಎಸೆಮ್‍ಪ್ಲಾಸ್ಟಿಕ್ ಪದಕ್ಕಿಂತ ಉತ್ತಮವೆಂದು ಹೇಳಲಾಗಿದೆ.

ಹಾಗೆಯೇ ಇವನ ಟೇಬಲ್ ಟಾಕ್ ಎಂಬ ಪುಸ್ತಕವೂ ಮನನಾರ್ಹ. ಅದಕ್ಕೆ ಕೆಲವು ನಿದರ್ಶನ: ಸ್ಕಿಲ್ಲರ್ ಬಲು ವಿಷಯ ಸಾಮಗ್ರಿಯ ದಣಿ, ಷೇಕ್ಸ್‍ಪಿಯರಾದರೊ ಮಿತವ್ಯಯ; ಸ್ಪೆನ್ಸರನದು ಹಂಸದ ನಡಿಗೆ; ವರ್ಜಿಲನಿಂದ ಅವನ ಪದಪುಂಜ, ಛಂದಸ್ಸುಗಳನ್ನು ಕಸಿದುಕೊಂಡರೆ ಅವನಲ್ಲಿ ಉಳಿಯುವುದೇನು? ಪ್ರತಿಭೆ ಸ್ಥಾಣುವಲ್ಲ. ವಿಕಾಸಯುಕ್ತ; ಮೇಧಾವಿಗಳು ತಪ್ಪು ಮಾಡುವುದಿಲ್ಲ. ಕೆಲವು ವೇಳೆ ಅಪೂರ್ಣವಾಗಿ ಸರಿ ಹೇಳುತ್ತಾರೆ. ಹೀಗೆ ಇಲ್ಲಿ ಅನೇಕ ಇತರ ಸಾಹಿತಿಗಳ ಮೇಲೆ ಪ್ರಚೋದಕವಾದ ನುಡಿಗಳೂ ವಿವರಗಳೂ ಇವೆ.

ಕೋಲ್‍ರಿಜ್‍ನ ವಿಮರ್ಶೆಯನ್ನು ಒಕ್ಕಣಿಸುವಾಗ ಅವನ ಕುಶಲಪತ್ರಗಳನ್ನು ಮರೆಯುವಂತಿಲ್ಲ. ಯೌವನದಲ್ಲಿ ಅವನ ದೃಷ್ಟಿ ಹೇಗೆ ಕೆಲವು ಕವಿಗಳಿಗೆ ವಕ್ರವಾಗಿತ್ತೆಂಬುದು ತಿಳಿಯಬರುತ್ತದೆ, ಅವನೂ ಒಬ್ಬ ಮನುಷ್ಯ ಮಾತ್ರನಾಗಿದ್ದನೆಂಬುದನ್ನು ಸ್ಥಾಪಿಸುತ್ತದೆ: ಮಿಲ್ಟನ್ನಿಗಿಂತ ಸ್ಕಿಲ್ಲರ್ ಹೆಚ್ಚು ಭವ್ಯ; ಬೌಲ್ಸ್ ದೇವಸದೃಶ, ಬರ್ಕ್ ಅಸಮರ್ಪಕ, ಬೇಸರದ ಕಂತೆ. ಆದರೆ ಇಂಥ ಮುಗ್ಗರಿಸಿಕೆ ಕೆಲವೇ ಕೆಲವು. ಒಳ್ಳೆಯ ಸೂಕ್ತಿ ಹೇರಳ: ಏಕತೆರನಾಗಿರಬೇಕೆಂಬ ವಿಧಾಯಕವನ್ನು ಕವಿಗಳ ಮೇಲೆ ಹೊರಿಸುವುದೇತಕ್ಕೆ? ನಾನು ತುಂಬ ಯೋಚಿಸುತ್ತೇನೆ, ಆದ್ದರಿಂದ ನಾನು ಕವಿಯಲ್ಲ; ಸೌದಿ ಬಲು ಕಡಿಮೆ ಯೋಚಿಸುತ್ತಾನೆ, ಆದ್ದರಿಂದ ಅವನೆಂದೂ ದೊಡ್ಡ ಕವಿ ಆಗಲಾರ; ಛಂದಸ್ಸಿನಲ್ಲೇ ಕೊಂಚ ರಾಗೋದ್ರೇಕವಿದೆ; ಎಲ್ಲ ಸಂದರ್ಭಕ್ಕೂ ಒಂದೇ ಬಗೆಯ ಶೈಲಿ ಸಲ್ಲುವುದಿಲ್ಲ; ನಾಟಕರಂಗ ಮಾಯೆಯ ತವರು.
ಸಾಹಿತ್ಯಾಭಿಮಾನಿಗಳಿಗೆ ಕೋಲ್‍ರಿಜ್ ದಿಟವಾಗಿ ದಾರಿತೋರುಗ.      (ಎಸ್.ವಿ.ಆರ್.)

ಸಾಹಿತ್ಯ ಮೀಮಾಂಸೆ : ಸಾಹಿತ್ಯ ಮತ್ತು ಸೌಂದರ್ಯಮೀಮಾಂಸಾ ಕ್ಷೇತ್ರದಲ್ಲಿ ಕೋಲ್‍ರಿಜ್‍ನದು ಹಿರಿಯಸ್ಥಾನ. ಇವನ ಬಗ್ಗೆ ಪ್ರಸಿದ್ಧ ವಿಮರ್ಶಕರು ತೋರಿರುವ ಅಭಿಪ್ರಾಯಗಳಲ್ಲಿ ಕೆಲವನ್ನು ನೋಡಬಹುದು. ಅರಿಸ್ಟಾಟಲ್, ಲಾಂಜೈನಸ್ ಮತ್ತು ಕೋಲ್‍ರಿಜ್-ಈ ಮೂವರು ಸಾಹಿತ್ಯ ಮೀಮಾಂಸೆಯಲ್ಲಿ ಅತ್ಯಂತ ದೊಡ್ಡವರು (ಜಾರ್ಜ್ ಸೇಂಟ್ಸ್‍ಬರಿ). ಬಯಗ್ರಾಫಿಯ ಲಿಟರರಿಯ ಇಂಗ್ಲಿಷ್ ಭಾಷೆಯಲ್ಲಿನ ಅತ್ಯಂತ ಉತ್ತಮ ವಿಮರ್ಶ ಗ್ರಂಥ (ಆರ್ಥರ್ ಸೈಮನ್ಸ್). ಈತ ಆಧುನಿಕ ಅರ್ಥಮೀಮಾಂಸೆಯ ಅಗ್ರಗಾಮಿ (ಐ.ಎ.ರಿಚಡ್ರ್ಸ್). ಇಂಗ್ಲಿಷಿನ ಯಾವನೇ ಸಾಹಿತ್ಯ ವಿಮರ್ಶಕನಿಗಿಂತ ಈತ ಅತ್ಯಂತ ದೊಡ್ಡವನು. ಇವನಲ್ಲಿ ಅಸ್ತಿತ್ವವಾದವೂ ಫ್ರಾಯ್ಡ್‍ನ ಮುನ್‍ಸೂಚನೆಗಳೂ ಕಾಣುತ್ತವೆ (ಹರ್ಬರ್ಟ್ ರೀಡ್). ಈತ ಮುಟ್ಟದ ವಿಷಯವಿಲ್ಲ, ನಿಜ. ಆದರೆ ಈತ ಯಾವ ಒಂದು ವಿಷಯಕ್ಕೂ ಪೂರ್ಣ ಗಮನವಿತ್ತವನಲ್ಲ (ಹ್ಯಾಜ್ಲಿಟ್). ವಿಶಾಲ ವ್ಯಾಪ್ತಿಯ ತತ್ತ್ವಗಳನ್ನು ವಿಕಸಿಸಬಲ್ಲ ಮಹತ್ತ್ವದ ಮೂಲಸತ್ಯಗಳನ್ನು ಯಥೇಚ್ಛವಾಗಿ ಹೊರಚೆಲ್ಲುವ ಅದ್ಭುತ ಶಕ್ತಿ ಈತನಿಗಿತ್ತು (ವಿಲಿಯಂ ವಡ್ರ್ಸ್‍ವತ್ರ್ಸ್). ಗುಹ್ಯಗಳ ಮತ್ತು ಸಂದೇಹಗಳ ನಡುವೆ ವಿವೇಚನಾಶಕ್ತಿಯನ್ನು ತಡೆಹಿಡಿಯುವ ಅಳವಿನ ಅಭಾವವನ್ನು ಇವನಲ್ಲಿ ಕಾಣುತ್ತೇವೆ (ಜಾನ್ ಕೀಟ್ಸ್). ಈತನೊಬ್ಬ ಗೊತ್ತುಗುರಿಯಿಲ್ಲದ ಸಾರಸಂಗ್ರಹಕಾರ (ರೆನ್‍ವೆಲಿಕ್). ಹಳೆಯ ವಿಮರ್ಶಕರ ಪೈಕಿ ಅಮೆರಿಕದ ಸಾಹಿತಿಗಳು ಸತತವಾಗಿ ಹೆಸರಿಸುವ ಇಬ್ಬರೆಂದರೆ ಅರಿಸ್ಟಾಟಲ್ ಮತ್ತು ಕೋಲ್‍ರಿಜ್. ಕಾವ್ಯಾಭಿವ್ಯಕ್ತಿಯ ವಿಚಾರವಾಗಿ ಕೊಲ್‍ರಿಜ್‍ನದು ಖಂಡಿತವಾಗಿ ಕೊನೆಯ ಮಾತು (ಟ್ರೆಯಲ್).

ಕೋಲ್‍ರಿಜ್ ತನ್ನ ಸಾಹಿತ್ಯ ಮೀಮಾಂಸೆಯನ್ನು ಮಂಡಿಸುವಲ್ಲಿ ಜರ್ಮನ್ ಪ್ರಾಜ್ಞರಾದ ಲೆಸಿಂಗ್, ಕಾಂಟ್, ಷಿಲರ್, ಷ್ಲೇಗಲ್, ಜೀನ್‍ಪಾಲ್-ಮೊದಲಾದವರಿಂದ ವಿಪುಲವಾಗಿ ಅಭಿಪ್ರಾಯಗಳನ್ನು ಬಳಸಿಕೊಂಡಿದ್ದಾನೆ. ಆದರೆ ಅವೆಲ್ಲವನ್ನೂ ಸಾಕಷ್ಟು ಚೆನ್ನಾಗಿ ಅರ್ಥಮಾಡಿಕೊಂಡು ತನ್ನವನ್ನಾಗಿ ಮಾಡಿಕೊಂಡಿದ್ದಾನೆ. ಸಕಲ ಜ್ಞಾನವೂ ಇವನ ಆಸಕ್ತಿಯ ಕ್ಷೇತ್ರವಾಗಿತ್ತು. ಇವನ ಓದು ಅತಿ ವಿಶಾಲವಾಗಿತ್ತು. ಅದರಲ್ಲಿಯೂ ಸೌಂದರ್ಯತತ್ತ್ವ ಜಿಜ್ಞಾಸೆಗೆ ಸಂಬಂಧಪಟ್ಟ ಮತ್ತು ಶುದ್ಧ ಸಾಹಿತ್ಯಿಕ ಕೃತಿಗಳಲ್ಲಿ ಇವನ ವ್ಯಾಸಂಗ ಆಳ ಮತ್ತು ವೈಶಾಲ್ಯತೆಯಿಂದ ಕೂಡಿತ್ತು. ಇವನ ಬುದ್ಧಿಶಕ್ತಿ ಬಹು ನವಿರಾಗಿದ್ದು ಮೆತುತ್ವ ಮತ್ತು ಸೂಕ್ಷ್ಮತೆಗಳಿಂದ ಕೂಡಿತ್ತು. ಇತರರ ನಿಲವನ್ನು ಅರ್ಥಮಾಡಿಕೊಳ್ಳುವ ಮತ್ತು ಮೆಚ್ಚಿಕೊಳ್ಳುವ ಶಕ್ತಿ ಇವನಲ್ಲಿ ಸಾಕಷ್ಟು ಇತ್ತು. ಇವನ ನಿಲುವು ಯಾವಾಗಲೂ ತರ್ಕಶುದ್ಧವಾಗಿತ್ತು. ಛಂದಸ್ಸು ಇವನಿಗೆ ಕರತಲಾಮಲಕವಾಗಿತ್ತು-ಹಲವು ಭಾಷೆಗಳ ಪರಿಚಯ ಇವನಿಗಿತ್ತು. ಇಂಗ್ಲಿಷ್ ಭಾಷೆ ಇವನಿಗೆ ಕರಗತವಾಗಿತ್ತು.-ಇವನದು ಬಹುಮುಖ ಸಾಧನೆ. ಈತ ಕವಿ, ತತ್ತ್ವಜ್ಞಾನಿ, ಪತ್ರಿಕೋದ್ಯಮಿ, ಧರ್ಮೋಪದೇಶಕ, ಭಾಷಣಕಾರ ಮತ್ತು ನಾಟಕಕರ್ತೃ.

ಸೌಂದರ್ಯಶಾಸ್ತ್ರ ಮತ್ತು ಕಾವ್ಯಮೀಮಾಂಸೆಗಳನ್ನು ಕುರಿತು ಕೋಲ್‍ರಿಜ್‍ನ ಅಭಿಪ್ರಾಯಗಳನ್ನು ಅವನ ಅನೇಕ ಕೃತಿಗಳಿಂದ ಆರಿಸಿ ತೆಗೆಯಬೇಕು. ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಬಹುದು: ಷೇಕ್ಸ್‍ಪಿಯರನನ್ನು ಕುರಿತ ಭಾಷಣಗಳು-ಮೂರು ಗ್ರಂಥಗಳು (1808-1814); ಆನೆ ದಿ ಪ್ರಿನ್ಸಿಪಲ್ಸ್ ಆಫ್ ಜೆನಿಯಲ್ ಕ್ರಿಟಿಸಿಸಂ (1814); ಬಯೊಗ್ರಾಫಿಯ ಲಿಟರರಿಯ (1817); ಲೆಕ್ಚರ್ಸ್ ಆನ್ ಪೊಯೆಟ್ರಿ (1818); ಪ್ರಿಲಿಮಿನರಿ ಟ್ರೀಟೀಸ್ ಆನ್ ಮೆಥೆಡ್ (1818); ಫಿಲಸಾಫಿಕಲ್ ಲೆಕ್ಚರ್ಸ್ (1818-19); ಲಿಟರರಿ ರಮೇನ್ಸ್ (1837-39); ಲೆಟರ್ಸ್-ಎರಡು ಸಂಪುಟಗಳು (1895).
ಹದಿನೆಂಟನೆಯ ಶತಮಾನದ ಜೈವಯಾಂತ್ರಿಕವಾದದ ಮನೋವಿಜ್ಞಾನವನ್ನು ಬದಲಾಯಿಸುವುದು ಕೋಲ್‍ರಿಜ್‍ನ ಮುಖ್ಯ ಕೆಲಸವಾಗಿತ್ತು. ಪ್ಲೇಟೋನ ತತ್ತ್ವಗಳ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದುದಲ್ಲದೆ, ಇಂಗ್ಲೆಂಡಿನಲ್ಲಿ ಗ್ರೀಸಿನ ಹೊಸ ಆದರ್ಶವನ್ನು ಈತ ಪ್ರಚಾರಕ್ಕೆ ತಂದ. ಕಾವ್ಯಸೃಷ್ಟಿಗೆ ಕಾರಣವಾದ ಮತ್ತು ಪ್ರಜ್ಞೆಗೆ ಹೊರತಾದ ಮಾನಸಿಕ ಕ್ರಿಯೆಗಳನ್ನು ವಿವರಿಸಲು ಯತ್ನಿಸಿದ. ಷೇಕ್ಸ್‍ಪಿಯರನ ನಾಟಕಗಳ ವಿಚಾರದಲ್ಲಿ ಜನರಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಉಂಟುಮಾಡಿ, ಅವನನ್ನು ಅಸಾಧಾರಣ ಪ್ರತಿಭಾಶಾಲಿಯ ಪಟ್ಟಕ್ಕೆ ಏರಿಸಿದ. ಸಾಹಿತ್ಯ ಸೃಷ್ಟಿ ಮತ್ತು ಸಾಹಿತ್ಯದ ಬಗ್ಗೆ ವಿವೇಚನೆಯಲ್ಲಿ ಪ್ರತಿಮಾಶಕ್ತಿ ಸರ್ವೋತ್ಕøಷ್ಟವಾದುದು ಮತ್ತು ಚಿತ್ತಾಕರ್ಷಕವಾದುದು ಎಂಬುದನ್ನು ಸಾರಿಹೇಳಿದ. ತತ್ತ್ವಶಾಸ್ತ್ರದ ವಿಚಾರದಲ್ಲಿ ತಾನು ಮಾಡಿದ ಚಿಂತನೆಗಳಿಂದ ಸೌಂದರ್ಯತತ್ತ್ವದ ಅನೇಕ ಅಭಿಪ್ರಾಯಗಳನ್ನು ನಿಯಂತ್ರಿಸಿದ. ವಿಮರ್ಶೆ ವಿಶೇಷ ಅರ್ಥದಲ್ಲಿ ಪ್ರತಿಮಾಶಕ್ತಿಯಿಂದ ನಿಯೋಜಿಸಲ್ಪಡುತ್ತದೆ ಎಂಬುದನ್ನು ಮೊದಲಬಾರಿಗೆ ತೋರಿಸಿ ಕೊಟ್ಟವ ಕೋಲ್‍ರಿಜ್. ಇವನ ಪ್ರಕಾರ ವಿಮರ್ಶೆ ಎಂದರೆ ಒಂದು ಕೃತಿಯಲ್ಲಿ ತಪ್ಪನ್ನು ಕಂಡುಹಿಡಿಯುವುದಲ್ಲ. ಕೃತಿಯ ಅನೇಕ ಮುಖಗಳನ್ನು ವಿವರಿಸುವುದು ಮತ್ತು ಅದರಲ್ಲಿರುವ ಸೊಗಸುಗಳನ್ನು ಎತ್ತಿತೋರಿಸುವುದು. ಇವನ ಸೌಂದರ್ಯಶಾಸ್ತ್ರ ಸಾಹಿತ್ಯಸೂತ್ರ ಮತ್ತು ವಿಮರ್ಶೆಯ ಮೂಲತತ್ತ್ವಗಳು ಮುಖ್ಯವಾಗಿ ಜ್ಞಾನಮೀಮಾಂಸೆ (ಎಪಿಸ್ಟಮಾಲಜಿ) ಮತ್ತು ಅಧ್ಯಾತ್ಮವಿದ್ಯೆಯಿಂದ (ಮೆಟಫಿಸಿಕ್ಸ್) ಹುಟ್ಟಿದವು. ಮಾನವನ ಸಹಜಗುಣವನ್ನು ಆಧರಿಸಿ ಹಿಂದೆ ನಿರೂಪಿತವಾಗಿದ್ದ ವಿಮರ್ಶೆಯನ್ನು, ಸಾಹಿತ್ಯ ಕೃತಿಗಳನ್ನು ತರ್ಕಬದ್ಧವಾಗಿ ಪರಿಶೀಲಿಸುವ ಸ್ಥಿರವಾದ ನಿಯಮಗಳನ್ನೊಳಗೊಂಡ ಒಂದು ವಿಜ್ಞಾನವನ್ನಾಗಿ ಮಾಡಬೇಕೆಂಬುದು ಇವನ ಆಶಯವಾಗಿತ್ತು.
ಜರ್ಮನ್ ಪ್ರಾಜ್ಞರ ಹಾಗೆ, ಕೋಲ್‍ರಿಜ್‍ನಲ್ಲೂ ಕಾವ್ಯವನ್ನು ತತ್ತ್ವಶಾಸ್ತ್ರಕ್ಕೆ ಸಮೀಕರಿಸುವ ಒಂದು ಪ್ರಬಲ ಚಪಲವಿತ್ತು. ಶ್ರೇಷ್ಠ ತತ್ತ್ವಜ್ಞಾನಿಯಲ್ಲದ ಯಾವನೂ ದೊಡ್ಡ ಕವಿಯಾಗಿಲ್ಲ ಎಂಬುದು ನಂಬಿಕೆ. ಆನಂದವನ್ನು-ಯಾಥಾಥ್ರ್ಯವನ್ನಲ್ಲ-ನೇರಗುರಿಯಾಗುಳ್ಳ ರಚನೆ ಕಾವ್ಯ ಎಂದು ಇವನ ಅಭಿಪ್ರಾಯ.

ಕೋಲ್‍ರಿಜ್ ತನ್ನ ಕಾವ್ಯಮೀಮಾಂಸೆಯಲ್ಲಿ ಕವಿಯ ವರ್ಣನೆ, ಅವನ ಸಜ್ಜು, ಅವನ ಸ್ವಾಭಾವಿಕ ಶಕ್ತಿಗಳು, ಕಲೆಯ ವರ್ಣನೆ ಮತ್ತು ಓದುಗನ ಮೇಲೆ ಅದರ ಪ್ರಭಾವ-ಇವಿಷ್ಟನ್ನೂ ಒಂದುಗೂಡಿಸಲು ಯತ್ನಿಸುತ್ತಾನೆ. ಇವನ ಪ್ರಕಾರ ಕವಿಯಾದವನಲ್ಲಿ ಇರಬೇಕಾದ ಅರ್ಹತೆಗಳು ಇವು: ಸಂವೇದನ ಶಕ್ತಿ, ಭಾವೋದ್ರಕ್ತತೆ. ಸಂಕಲ್ಪ, ವಿವೇಕ, ವಿಮರ್ಶನಶಕ್ತಿ, ಲಫುಕಲ್ಪನೆ, ವಿಭಾವನೆ ಇತ್ಯಾದಿ. ಕವಿ ಗುಣಶೀಲನಾಗಿರಬೇಕು. ಅಧ್ಯಾತ್ಮವಿದ್ಯೆಯಲ್ಲಿ ಆಳವಾದ ಪಾಂಡಿತ್ಯವುಳ್ಳವನಾಗಿರಬೇಕು. ದೊಡ್ಡ ತತ್ತ್ವಜ್ಞಾನಿಯಾಗಿರಬೇಕು. ಇತಿಹಾಸಕಾರನಾಗಿರಬೇಕು, ಪ್ರಕೃತಿಶಾಸ್ತ್ರಜ್ಞನಾಗಿರಬೇಕು. ಮತ್ತು ಮತಶÀ್ರದ್ದೆಯುಳ್ಳವನಾಗಿರಬೇಕು. ಧರ್ಮನಿಷ್ಠನಲ್ಲದ ಕವಿ ಹುಚ್ಚ, ಅಂಧವನು ಕವಿಯಾಗುವುದು ಸಾಧ್ಯವೇ ಇಲ್ಲ. ಅವನಿಗೆ ಸಕಲಜ್ಞಾನದ ಪರಿಚಯವಿರಬೇಕು.

ಕವಿ ಒಂದು ಅಸಾಮಾನ್ಯ ಉದ್ರಿಕ್ತಸ್ಥಿತಿಯಲ್ಲಿ, ಮನಸ್ಸಿನ ಒಂದು ಸ್ಥಿರವಾದ ತೀವ್ರತೆಯಲ್ಲಿ ಕಾವ್ಯಸೃಷ್ಟಿ ಮಾಡುತ್ತಾನೆ. ಕವಿ ಎಲ್ಲವೂ ಆಗಿರುತ್ತಾನೆ-ಜಾಗೃತ ಮತ್ತು ಅಜಾಗೃತ; ತತ್ತ್ವಜ್ಞಾನಿ ಮತ್ತು ಶಿಶು; ಬುದ್ಧಿಶಾಲಿ ಮತ್ತು ಸಂವೇದನಾಪರ; ರಚನಚತುರ ಮತ್ತು ಉದ್ವೇಗಪರ. ಕೋಲ್‍ರಿಜ್‍ನ ಪ್ರಕಾರ ಈ ಅರ್ಥದಲ್ಲಿ ಷೇಕ್ಸಪಿಯರ್ ಒಬ್ಬ ಪ್ರತಿಭಾಶಾಲಿ.

ಕಾವ್ಯದ ಉದ್ದೇಶ ಆನಂದ ಎಂಬುದನ್ನೂ ಕಾವ್ಯದಲ್ಲೊಂದು ಆದರ್ಶ ಮೂಡಿಬರಬೇಕು ಎಂಬುದನ್ನೂ ಕೋಲ್‍ರಿಜ್ ಒತ್ತಿ ಹೇಳಿದ್ದಾನೆ. ಕಲಾಕೃತಿಯಲ್ಲಿ ಐಕ್ಯತೆ ಇರಬೇಕು ಎಂಬುದು ಕೋಲ್‍ರಿಜ್‍ನ ಅಭಿಪ್ರಾಯ. ಹಿಂದಿನ ಕಾಲೈಕ್ಯ, ಬೇಕಾದ ಔಚಿತ್ಯಕ್ಕೆ ಪ್ರಾಧಾನ್ಯವೀಯುತ್ತಾನೆ.

ಹದಿನೇಳನೆಯ ಶತಮಾನದಲ್ಲಿ ವಿಭಾವ (ಇಮ್ಯಾಜಿನೇಷನ್) ಮತ್ತು ಲಘುಕಲ್ಪನೆ (ಫ್ಯಾನ್ಸಿ) ಎರಡೂ ಸಮಾನಾರ್ಥದಲ್ಲಿ ಉಪಯೋಗಿಸಲ್ಪಡುತ್ತಿದ್ದುವು. ಅವೆರಡೂ ಭಿನ್ನವಾದುವುಗಳೆಂದು ಕೋಲ್‍ರಿಜ್ ತೋರಿಸಿಕೊಟ್ಟ..
ಕಾವ್ಯಸೃಷ್ಟಿಯಲ್ಲಿ ವಿಭಾವನೆಯ ಪಾತ್ರದ ಮಹತ್ತ್ವವನ್ನು ಕೋಲ್‍ರಿಜ್‍ನ ಈ ಮಾತುಗಳು ಸ್ಪಷ್ಟಪಡಿಸುತ್ತವೆ: ಒಳ್ಳೆಯ ಪ್ರಜ್ಞೆ ಕಾವ್ಯಪ್ರತಿಭೆಯ ಕಾಯ; ಲಘುಕಲ್ಪನೆ ಅದರ ಉಡಿಗೆ, ಚಲನೆ ಅದರ ಜೀವ; ಎಲ್ಲೆಡೆಯಲ್ಲೂ ಮತ್ತು ಪ್ರತಿಯೊಂದರಲ್ಲೂ ಇರುವ ವಿಭಾವನೆ ಅದರ ಆತ್ಮ; ಅದು ಎಲ್ಲವನ್ನೂ ರಮ್ಯವಾದ ಮತ್ತು ಪ್ರಜ್ಞೆಯುಳ್ಳ ಅಖಂಡವಾದುದನ್ನಾಗಿ ರೂಪಿಸುತ್ತದೆ.

ಸೌಂದರ್ಯದ ಬಗ್ಗೆ ಕೋಲ್‍ರಿಜ್‍ನ ಅಭಿಪ್ರಾಯ ಹೀಗಿದೆ: ಸೌಂದರ್ಯವೆಂದರೆ ಸಾಮರಸ್ಯ, ಅನೇಕತೆಯಲ್ಲಿ ಕಾಣುವ ಏಕತೆ. ಸೌಂದರ್ಯ ನೇರ ಆನಂದವನ್ನು ಕೊಡಬೇಕು. ಸುಂದರವಾದುದು ಉಪಯುಕ್ತವಾದುದು ಮತ್ತು ಹಿತವಾದುದು-ಇವುಗಳ ನಡುವಣ ಭಿನ್ನತೆಯನ್ನು ಕೋಲ್‍ರಿಜ್ ಗುರುತಿಸುತ್ತಾನೆ. ಸದ್ಗುಣ ಮತ್ತು ಪವಿತ್ರತೆಗಳ ಸೌಂದರ್ಯವನ್ನು ಇಂದ್ರಯಾತೀತ ಲಾವಣ್ಯ ಎಂದು ಈತ ಒಂದು ಕಡೆ ಹೆಸರಿಸುತ್ತಾನೆ.

ಕಾವ್ಯದಲ್ಲಿನ ಭವ್ಯತೆ, ಕವಿಕೃತಿಗೆ ಕಾರಣವಾದ ಪ್ರತಿಭೆಯ ವಿಶ್ಲೇಷಣೆ, ಪದ್ಯಗದ್ಯಗಳಿಗಿರುವ ಮುಖ್ಯ ಭೇದ, ಅವು ಬಳಸುವ ಭಾಷೆಯ ವಿಚಾರ, ಛಂದಸ್ಸಿನ ಅಗತ್ಯ ಮತ್ತು ಸ್ಥಾನಮಾನ-ಈ ವಿಚಾರಗಳ ಬಗ್ಗೆ ಕೋಲ್‍ರಿಜ್ ಹೆಚ್ಚಿನ ವಿವರಣೆ ನೀಡಿದ್ದಾನೆ.

ಕೋಲ್‍ರಿಜ್‍ನ ಕಾವ್ಯ ಮೀಮಾಂಸೆಯ ಮುಖ್ಯ ಲಕ್ಷಣಗಳನ್ನು ಹೀಗೆ ಸಂಗ್ರಹಿಸಬಹುದು: ಇವನದು ಮೂಲತ: ತರ್ಕಶಾಸ್ತ್ರಜ್ಞನ ದೃಷ್ಟಿಯಲ್ಲ, ಮನಶಾಸ್ತ್ರಜ್ಞನದು. ಕವಿಪ್ರತಿಭೆಯನ್ನುಳ್ಳ ಈತ ಅದೇ ಶಕ್ತಿಯಿಂದ ವಿಮರ್ಶನ ಕ್ಷೇತ್ರವನ್ನೂ ಅವಲೋಕನ ಮಾಡಿದ್ದಾನೆ. ಆದರ್ಶೀಕರಣದ ಕಡೆ ಇವನಿಗೆ ಹೆಚ್ಚಿನ ಒಲವು. ಇವನ ಬೌದ್ಧಿಕ ಆಸಕ್ತಿಗಳು ಬಹುಮುಖವಾದುವು. ಆ ಕಾರಣದಿಂದ ಇವನದು ವಿಶಾಲಹರವು. ಆದ್ದರಿಂದ ಆ ಕಾಲದಲ್ಲಿದ್ದ ಇಲ್ಲ ಸಾಹಿತ್ಯವೂ ಇವನ ವಿಮರ್ಶೆಯ ಕ್ಷೇತ್ರವಾದುದರಲ್ಲಿ ಆಶ್ಚರ್ಯವೇನಿಲ್ಲ.

ಇವನ ಕಾವ್ಯ ಮೀಮಾಂಸೆಯಲ್ಲಿ ದೋಷಗಳಿಲ್ಲದಿಲ್ಲ. ಕವಿಗಳ ಬಗ್ಗೆ ಇವನ ಅಭಿಪ್ರಾಯಗಳು ಅನಿಶ್ಚಿತವಾದುವು. ಗೊತ್ತುಗುರಿ ಇಲ್ಲದುವು. ಇವನ ಅತಿಶಿಷ್ಟತನ, ಅಂಧಾಭಿಮಾನ ಮತ್ತು ಅತಿರೇಕದ ಸ್ವದೇಶ ಪ್ರೇಮ ಅನೇಕ ಸಂದರ್ಭಗಳಲ್ಲಿ ಇವನ ಸಾಹಿತ್ಯ ವಿಮರ್ಶೆಯನ್ನು ಕೆಡಿಸಿವೆ-ಎಂದು ಕೆಲವರ ಅಭಿಪ್ರಾಯ. ನೆಪೋಲಿಯನ್ ಮತ್ತು ಫ್ರಾನ್ಸಿನ ಬಗ್ಗೆ ಇವನಿಗಿದ್ದ ದ್ವೇಷ ಮನೋಭಾವ, ಫ್ರೆಂಚ್ ಸಾಹಿತ್ಯದಲ್ಲಿನ ಒಳ್ಳೆಯ ಗುಣಗಳನ್ನು ಗುರುತಿಸದಂತೆ ಮಾಡಿವೆ. ಇವನಲ್ಲಿ ಸೂಕ್ಷ್ಮ ಗ್ರಹಣಶಕ್ತಿ ಹೇರಳವಾಗಿತ್ತಾದರೂ ಇವನು ಒಬ್ಬ ಗುರಿಯಿಲ್ಲದ, ಹೊಣೆಗಾರಿಕೆಯರಿಯದ ಕನಸಿಗ. ತನ್ನ ಮಾನಸಿಕ ಕಲ್ಪನೆಯನ್ನು ಕಾರ್ಯಗತಮಾಡುವ ಸಂಕಲ್ಪಶಕ್ತಿ ಇವನಲ್ಲಿರಲಿಲ್ಲ. ಪ್ರಸಕ್ತ ವಿಷಯವನ್ನು ಬಿಟ್ಟು ಎತ್ತಲೋ ಹೋಗಿಬಿಡುವುದು ಇವನ ಸ್ವಭಾವ ಜನ್ಯಪ್ರವೃತ್ತಿಯಾಗಿತ್ತು. ಆದುದರಿಂದ ಇವನ ವಿಮರ್ಶೆಯಲ್ಲಿ ಬಳಸಾಟ ಅತಿಯಾಗಿದೆ. ಅದೇ ಕಾರಣದಿಂದ `ಇವನ ಭಾಷಣ ಮತ್ತು ಬರೆಹಗಳಲ್ಲಿ, ಸಾಹಿತ್ಯ, ಸೌಂದರ್ಯ ಅಥವಾ ಭವ್ಯತೆಯ ಬಗ್ಗೆ ಸುಸಂಗತ, ವ್ಯವಸ್ಥಿತ ಮತ್ತು ಸಮನ್ವಿತ ವಿಚಾರಸರಣಿ ಇಲ್ಲ-ಎಂದು ಇನ್ನು ಕೆಲವರ ಅಭಿಪ್ರಾಯ.

ಇಷ್ಟು ನಿಜ. ಸಕಲಜ್ಞಾನವೂ ಕೋಲ್‍ರಿಜ್‍ನ ವ್ಯವಸಾಯ ಕ್ಷೇತ್ರವಾಗಿತ್ತು. ಯಾವ ವಿಷಯದ ಬಗ್ಗೆಯಾಗಲಿ ಅರೆಜ್ಞಾನದಿಂದ ಇವನಿಗೆ ತೃಪ್ತಿಯಾಗುತ್ತಿರಲಿಲ್ಲ. ಅರಿವನ್ನು ಹೆಚ್ಚಿಸುವುದು ಇವನ ಪ್ರಧಾನ ಗುರಿಯಾಗಿತ್ತು. ಅನೇಕ ವಿಷಯಗಳ ಬಗ್ಗೆ ಈತ ಹೊಸ ಆಲೋಚನಾಮಾರ್ಗಗಳನ್ನು ತೆರೆದ. ಸೃಷ್ಟಿಕಾರ್ಯಕ್ಕೆ ಒಂದು ದಾರ್ಶನಿಕ ಹಿನ್ನೆಲೆಯನ್ನು ಕೊಟ್ಟ, ಬುದ್ಧಿಯ ಕಾರ್ಯವಿಧಾನಗಳಿಗೆ ರಸಜ್ಞತೆಯ ಮೌಲ್ಯವನ್ನು ಕೊಟ್ಟ. ತನ್ನ ಅಲೆದಾಟದಲ್ಲಿ ವಿಮರ್ಶೆಗೆ ಸಂಬಂಧಿಸಿದ ಅನೇಕ ಸತ್ತ್ವಗಳನ್ನು ಹುಡುಕಿದ. ಸಾಹಿತ್ಯದ ಅವಿಚ್ಛಿನ್ನತೆಗೆ ಕಾರಣವಾದ ಜೀವಂತ ತತ್ತ್ವಗಳ ಅನ್ವೇಷಣೆ ಇವನಿಗೆ ಅತಿಪ್ರಿಯವಾಗಿತ್ತು. ಅಪೂರ್ವಸಾಹಿತ್ಯಾಭಿರುಚಿ, ಸೂಕ್ಷ್ಮಪರಿಶೀಲನಾಶಕ್ತಿ, ಬಹುಮುಖಪ್ರತಿಭೆ, ತತ್ತ್ವಾನ್ವೇಷಣೆಯ ಬಗ್ಗೆ ಒಲವು ಇವೆಲ್ಲ ಇವನದಾಗಿದ್ದವು. ಈತ ದೊಡ್ಡ ವಿಮರ್ಶಕರ ಯುಗದ ಅತಿದೊಡ್ಡ ವಿಮರ್ಶಕ.  							(ಎಸ್.ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ